16 January 2022

ಗತ ನೆನಪುಗಳ ಸ್ಮರಿಸೋಣ.


 



ಇಂದು ಬೆಳಿಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂದು ಅಂಕಣ ಓದುವಾಗ   ಅಮೇರಿಕಾದ ಲೇಖಕರಾದ ರಿಕ್ ವಾರೆನ್ ಅವರು ಹೇಳಿದ ಮಾತು ನನ್ನನ್ನು ಸೆಳೆಯಿತು.ಅದು " ನಾವು ಭೂತಕಾಲದಿ ಉದಯಿಸಿದವರು ಆದರೆ ಅದೇ ಭೂತದಲ್ಲಿ ಬಂಧಿಯಾಗಬಾರದು" ಹೌದಲ್ಲವೇ ನಾವು ಇಂದು ಏನಾಗಿದ್ದೇವೋ ಅದಕ್ಕೆ ಗತಕಾಲದೊಂದಿಗೆ ಖಂಡಿತವಾಗಿಯೂ ಸಂಬಂಧವಿದೆ. ಆದರೆ ಅದನ್ನೇ ನೆನೆಪು ಮಾಡಿಕೊಂಡು ಪ್ರತಿದಿನ ಪ್ರತಿಕ್ಷಣ ಕುಳಿತರೆ ವರ್ತಮಾನದಲ್ಲಿ ಜೀವನ ಸಾದ್ಯವೇ?  ಭೂತವೂ ಬೇಕು , ವರ್ತಮಾನದಿ ಬದುಕಬೇಕು ಮತ್ತು ತನ್ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಬೇಕು.


ಸವಿನೆನಪುಗಳು ಬೇಕು ಸವಿಯಲೀ ಬದುಕು ಎಂಬ ಕವಿವಾಣಿಯಂತೆ ಸವಿ ನೆನಪುಗಳು ನಮ್ಮನ್ನು ಸಂತಸವಾಗಿಡಲು ನಮ್ಮ ಆನಂದವನ್ನು ಇಮ್ಮಡಿಗೊಳಿಸಲು ಖಂಡಿತವಾಗಿಯೂ ಬೇಕು. ಆದರೆ ಬಹುತೇಕ ಬಾರಿ ಬೇಡವೆಂದರೂ ನಮಗಾದ ನೋವು, ಅವಮಾನ, ತೊಂದರೆಗಳೇ ದುತ್ತೆಂದು ಬಂದು ನಮ್ಮ ಮೇಲೆಯೇ ಎರಗಿ ನಮ್ಮ ಮನೋಬಲವನ್ನು ಕುಗ್ಗಿಸಿ ನಮ್ಮ ಕಡೆ ಕುಹಕದ ನಗೆ ಬೀರಿ ಹಂಗಿಸುತ್ತವೆ.


ವರ್ತಮಾನದಲದಲಿ ಜೀವಿಸಿ ಎಂದು ಸಾಧು ಸಂತರು, ಹಿರಿಯರು, ತಿಳಿದವರು ,ಹಿತೈಷಿಗಳು, ವ್ಯಕ್ತಿತ್ವ ವಿಕಸನದ ಗುರುಗಳು ದಿನಗಟ್ಟಲೆ ಉಪನ್ಯಾಸ ನೀಡಿದರೂ ಅವರೇಳಿದಷ್ಟು ಸಲೀಸಾಗಿ ವರ್ತಮಾನದಲ್ಲಿ ಜೀವಿಸಲು ಸಾದ್ಯವೇ? ಕಷ್ಟ ಸಾಧ್ಯ. ಅವರ ಮಾತುಗಳಲ್ಲಿ ಸತ್ಯವಿದೆ  ಆದರೂ ಆಚರಣೆಯಲ್ಲಿ ಅಷ್ಟು ಸುಲಭವಲ್ಲ . ವರ್ತಮಾನದಲ್ಲಿ ಜೀವಿಸುವ  ಪ್ರಯತ್ನ ಜಾರಿಯಲ್ಲಿರಲಿ.


ಕೆಲವೊಮ್ಮೆ ನಮ್ಮ ಹಳೆಯ ನೆನಪುಗಳು ಮಧುರವೂ ಹೌದು .ಇತ್ತೀಚಿನ ದಿನಗಳಲ್ಲಿ"  ಪಾಸ್ಟ್ ಲೈಪ್ ರಿಗ್ರೆಷನ್ ಟೆಕ್ನಿಕ್"  ಎಂಬ ಚಿಕಿತ್ಸಾ ಪದ್ದತಿಯು ಬಹಳ ಜನಪ್ರಿಯವಾಗುತ್ತಿದೆ. ನಮ್ಮ ಕೆಲ ಅನಾರೋಗ್ಯದ ಸಮಸ್ಯೆಗಳಿಗೆ ಅಲೋಪತಿ, ಹೋಮಿಯೋಪತಿ ಮುಂತಾದ ಚಿಕಿತ್ಸಾ ಪದ್ಧತಿಯಲ್ಲಿ ಗುಣವಾಗದ ಖಾಯಿಲೆಗಳು ನಮ್ಮ ಗತಕಾಲದ ನೆನಪುಗಳು ಮರುಕಳಿಸುವ ಚಿಕಿತ್ಸೆಯ ಮೂಲಕ ಗುಣಪಡಿಸುವುದನ್ನು ಕಂಡಿದ್ದೇವೆ. ಈ ಕೇಂದ್ರಗಳು ‌ಮೊದಲು ವಿದೇಶಗಳಲ್ಲಿ ಜನಪ್ರಿಯವಾಗಿ ಈಗ ಬೆಂಗಳೂರಿನಂತಹ ನಗರಗಳಲ್ಲೂ ತಲೆಎತ್ತಿವೆ. 

ಇಂದಿನ ಆಧುನಿಕತೆಯ ಭರಾಟೆ, ಮಾಲಿನ್ಯ, ದಿನಕ್ಕೊಂದು ರೋಗದ ಜನನ, ಸಂಬಂಧಗಳಲ್ಲಿ ಬಿರುಕು, ಅತಿಯಾದ ಯಾಂತ್ರೀಕರಣ, ಎಲ್ಲದರಲ್ಲೂ ಕೃತಕತೆ, ಹಣವೇ ಶ್ರೇಷ್ಠ ಎಂಬ ಭಾವನೆಗಳನ್ನು ನೋಡಿದಾಗ ನಮ್ಮ ಸುಮಧುರ ಬಾಲ್ಯ, ನಮ್ಮ ಕಾಲೇಜು ದಿನಗಳು, ಮೊದಲ ಕ್ರಷ್, ಗೆಳೆಯರೊಡನೆ ಮಾಡಿದ ಪ್ರವಾಸ ನೆನದಾಗ ಏನೋ ಒಂದು ರೀತಿಯ ಆನಂದ ನಮ್ಮನ್ನು ಆವರಿಸಿಕೊಳ್ಳುವುದು ಸುಳ್ಳಲ್ಲ. ಆದ್ದರಿಂದ ಗೆಳೆಯರೇ ದುಡ್ಡು ಕೊಟ್ಟು ಗತಕಾಲಕ್ಕೆ ಹಿಂದಿರುಗುವ ಥೆರಪಿಗೆ ಒಳಗಾಗದೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಕೆಲ ಕಾಲವಾದರೂ ನಮ್ಮ ಬಾಲ್ಯದ ಗತವೈಭವಕ್ಕೆ ಮರಳೋಣ ಸುಂದರ ಗತ ನೆನಪುಗಳ ನೆನೆಯೋಣ ಸಂತಸದ ಮಳೆಯಲಿ ನೆನೆಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


No comments: