ಸಿಹಿಜೀವಿಯ ದಿನಚರಿ ೧
2022 ರ ಹೊಸ ಕ್ಯಾಲೆಂಡರ್ ವರ್ಷದ ಮೊದಲ ದಿನ ಮಾರ್ನಿಂಗ್ ಕ್ಲಾಸ್ ಇದ್ದದ್ದರಿಂದ ಎಂದಿನಂತೆ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ನಿತ್ಯ ಕರ್ಮ ಮುಗಿಸಿ ದೇವರಿಗೆ ನಮಿಸಿ ಒಂದು ಗಂಟೆಯ ಕಾಲ ಯೋಗ ,ಧ್ಯಾನ, ಪ್ರಾಣಾಯಾಮ ಮಾಡಿದೆ. ನನ್ನ ಜೊತೆಯಲ್ಲಿ ಎದ್ದ ನನ್ನ ಅರ್ಧಾಂಗಿ ಮನೆ ಮುಂದೆ ನೀರು ಹಾಕುವುದು, ರಂಗೋಲಿ ಹಾಕುವ ಕಾರ್ಯದಲ್ಲಿ ಮಗ್ನವಾದಳು ನಿಧಾನವಾಗಿ ಎದ್ದ ನನ್ನ ಇಬ್ಬರೂ ಮಕ್ಕಳು ನನಗೆ ಹೊಸ ವರ್ಷದ ಶುಭಾಶಯ ಹೇಳಿದರು.
ದೋಸೆ ಮತ್ತು ಚಟ್ನಿ ಯನ್ನು ತಿಂದು ಮನೆ ಬಿಟ್ಟು ತುಮಕೂರಿನ ಮಹಾಲಕ್ಷ್ಮಿ ನಗರದ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದು ಮತ್ತೆ ನನ್ನ ಬೈಕ್ ಶಾಲೆಯ ಕಡೆ ತಿರುಗಿಸಿದೆ. ಶಾಲೆಯ ಒಳಗೆ ಪ್ರವೇಶಿಸುವಾಗ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟ ಮಕ್ಕಳು ಸ್ವಾಗತಿಸಿ ಹೊಸ ವರ್ಷದ ಶುಭಾಶಯಗಳ ಕೋರಿದರು ನನ್ನ ಸಹೋದ್ಯೋಗಿ ಮಿತ್ರರೊಂದಿಗೆ ಶುಭಾಶಯಗಳ ವಿನಿಮಯ ಮಾಡಿಕೊಂಡೆವು.
ಶಾಲೆಯ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಇದು ಕ್ಯಾಲೆಂಡರ್ ಹೊಸ ವರ್ಷ ನಮಗೆ ಯುಗಾದಿ ಹೊಸ ವರ್ಷ ಆದರೂ ನಾನು ನಮ್ಮ ಶಿಕ್ಷಕರ ಪರವಾಗಿ ಹೊಸ ವರ್ಷದ ಶುಭಾಶಯ ಕೋರಿದೆ.
ಆಚರಣೆಯ ಗುಂಗಲ್ಲಿ ಇದ್ದ ಮಕ್ಕಳಿಗೆ
ಪಾಠ ಕೇಳಲು ಅಂತಹ ಆಸಕ್ತಿ ಇಲ್ಲದಿದ್ದರೂ "ಪೋಸ್ಟ್ ಇಂಡಿಪೆಂಡೆಂಟ್ ಇಂಡಿಯಾ" ಎಂಬ ಹತ್ತನೆಯ ತರಗತಿಯ ಪಾಠ ಆರಂಭಿಸಿ ಪಟೇಲರು ಭಾರತವನ್ನು ಏಕೀಕರಣ ಮಾಡಿದ ಪಾಠವನ್ನು ಮಾಡಿದೆ.
ನಮ್ಮ ಎರಡನೇ ಕುಟುಂಬವಾದ ಶಾಲೆಯಲ್ಲಿ ನಮ್ಮ ಕಲಾವಿದ ಮಿತ್ರರಾದ ಕೋಟೆ ಕುಮಾರ್ ರವರು ನಮಗೆಲ್ಲ ಕೇಕ್ ಮತ್ತು ಬೆಳಗಿನ ತಿಂಡಿಕೊಡಿಸಿದರು. ಸಂತಸದಿಂದ ಮಾತನಾಡುತ್ತಾ ಸಹೋದ್ಯೋಗಿಗಳು ತಿಂಡಿಯ ತಿಂದು ಅವರಿಗೆ ಧನ್ಯವಾದ ತಿಳಿಸಿದೆವು
ಎಲ್ಲಾ ಮಕ್ಕಳು ಅವರವರ ತರಗತಿಯಲ್ಲಿ ತಂದಿದ್ದ ಕೇಕ್ ಗಳನ್ನು ಕತ್ತರಿಸಿ ಮಕ್ಕಳಿಗೆ ಹರಸಿದೆವು ಹೊಟ್ಟೆಗೆ ತಿನ್ನಬೇಕಾದ ಕೇಕ್ ನ್ನು ಮುಖ ಕೈಗೆ ಸವರಿ ಕಿರುಚುವ ಮಕ್ಕಳಿಗೆ ಹೊಸ ವರ್ಷವಾದರೂ ಬೈಯ್ದು ಬುದ್ದಿ ಹೇಳಬೇಕಾಯಿತು.
ಕ್ಯಾತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಆದ ಶ್ರೀ ರವೀಶ್ ರವರು ನಮ್ಮ ಶಾಲೆಗೆ ಬಂದು ಪೋಷಕರಿಗೆ ಮತ್ತು ಮಕ್ಕಳಿಗೆ ಮಕ್ಕಳ ಲಸಿಕೆಯ ಮಹತ್ವ ತಿಳಿಸಿ ಒಂಭತ್ತು ಮತ್ತು ಹತ್ತನೆಯ ತರಗತಿಯ ಮಕ್ಕಳಿಗೆ ಲಸಿಕೆ ನೀಡವ ಸರ್ಕಾರದ ನಿರ್ಧಾರವನ್ನು ಪೋಷಕರಿಗೆ ತಿಳಿಸಿದರು .
ತರಗತಿ ಮುಗಿಸಿ ಮನೆಗೆ ಬಂದು ಹೊಸ ವರ್ಷದ ಅಂಗವಾಗಿ ಕುಟುಂಬದ ಸದಸ್ಯರೊಂದಿಗೆ ವಿಶೇಷ ಕಾಯಿ ಹೋಳಿಗೆ ಊಟ ಮಾಡಿ ವಿಶ್ರಾಂತಿ ಪಡೆದೆ.
ಸಂಜೆ ಮನರಂಜನೆಗೆ ದುರ್ಗದ ಜಗನ್ನಾಥ ಚಲನಚಿತ್ರ ಮತ್ತು ಸರಿಗಮಪ ಹಾಡಿನ ಕಾರ್ಯಕ್ರಮ ನೋಡಿದೆ ಈ ನಡುವೆ ಆತ್ಮೀಯರು ಮತ್ತು ಹಿತೈಷಿಗಳಾದ ಶ್ರೀ ನಂಜುಂಡಪ್ಪ ಸರ್ ರವರ ಮನೆಗೆ ಹೋಗಿ ಅವರಿಗೆ ಹೊಸ ವರ್ಷದ ಶುಭಾಶಯಗಳ ತಿಳಿಸಿ ಮಾತಾನಾಡಿ ಬಂದೆ.
ರಾತ್ರಿಯ ಚಪಾತಿ ಊಟದ ನಂತರ ಪಲ್ಲವಿ ಇಡೂರು ಬರೆದ "ಆಗಸ್ಟ್ ಮಾಸದ ನೆನಪು " ಪುಸ್ತಕ ಓದಿ ಮುಗಿಸಿದೆ ಆ ಪುಸ್ತಕ ಭಾರತದ ಸ್ವಾತಂತ್ರ್ಯ ಹೋರಾಟದ ಕೆಲ ಒಳಮಗ್ಗಲುಗಳ ಪರಿಚಯಿಸಿತು ಭಾರತ ಎರಡು ದೇಶಗಳಾಗಲು ನೈಜ ಕಾರಣ ತಿಳಿಯಲು ಎಲ್ಲರೂ ಆ ಪುಸ್ತಕ ಓದಲೇಬೇಕು.
ಹೀಗೆ ಹೊಸ ಕ್ಯಾಲೆಂಡರ್ ವರ್ಷದ ಮೊದಲ ದಿನ ಬಹಳ ಸಂತಸದಿಂದ ಕಳೆದ ನನ್ನನ್ನು ರಾತ್ರಿ ಹನ್ನೊಂದು ಗಂಟೆಗೆ ನಿದ್ರಾದೇವಿಯ ಸ್ವಾಗತಿಸಿದಾಗ ಇಲ್ಲ ಎನ್ನುವ ಮನಸಾಗಲಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment