*ಸನ್ಮಾರ್ಗ ಭಾಗ೧*
ಅಂದು ಮಂಗಳವಾರ ಬೆಳಿಗ್ಗೆ ಒಂಬತ್ತೋ ಒಂಭತ್ತುವರೆ ಇರಬಹುದು ಊರಿನ ಭಕ್ತಮಹಾಶಯರು ಸ್ನಾನ ಮಾಡಿ ಮಡಿ ಉಟ್ಟು ಅಮ್ಮನವರ ಗುಡಿಯ ಕಡೆ ಸಾಗುತ್ತಿದ್ದರು. ಗುಡಿಯಲ್ಲಿ ಆಯ್ತಾರಪ್ಪ ಅಮ್ಮನಿಗೆ ಗುಡಿಯ ಬಲಭಾಗದಲ್ಲೇ ಕಟ್ಟಿಗೆ ಒಲೆಯಲ್ಲಿ ತಳಿಗೆ ಅನ್ನ ಮಾಡುತ್ತಾ ಗರ್ಭಗುಡಿಯಲ್ಲಿ ಪೂಜೆಗೆ ಅಣಕ ಮಾಡುತ್ತಿದ್ದರು. ಗುಡಿಯ ಒಳಗೆ ಜನರು ಬಂದು ಕೈಮುಗಿದು ಮಂಗಳಾರತಿಗೆ ಕಾದು ಕುಳಿತರು ಗುಡಿಯ ಒಳಗಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಗುಡಿಯಿಂದ ಹತ್ತು ಮೀಟರ್ ದೂರದಲ್ಲಿ ಕುಳಿತು ಕಾಣದಿರುವ ಪೂಜಾವಿಧಿಗಳನ್ನು ಕಾಣಲು ತವಕಿಸುತ್ತಿದ್ದರು .ಕೆಲವರು ನಾವೂ ಅವರಂತೆ ಗುಡಿಯ ಒಳಗೆ ಹೋಗಲಾಗುವುದಿಲ್ಲವಲ್ಲ ಎಂದು ಬೇಸರವಾದರೂ ಅಮ್ಮನ ನೆನದು ಭಯದಿಂದ ಅಲ್ಲೇ ಕೈಮುಗಿದು ಕುಳಿತರು ಬಹುಶಃ ಅವರೆಲ್ಲರೂ ನಮಗೆ ಬೆಳಕಿನ ದಾರಿ ತೋರು ತಾಯಿ ಎಂದು ಬೇಡಿರಬೇಕು.
ಗುಡಿಯ ಮುಂದಿನ ಟಾರ್ ರೋಡ್ ದಾಟಿ ಇರುವ ಅಮ್ಮನ ಮರವೆಂದೇ ಹೆಸರಾದ ಬೇವಿನಮರದ ಕೆಳಗೆ ಚೌಕಾಬಾರ ಹಾಡುವ ನಾಲ್ಕು ಜನರ ತಂಡ ಹಾಜರಾಗಿ ಏನೊ ಸಾಧನೆ ಮಾಡಿದವರಂತೆ ಬೆವರು ವಾಸನೆ ಬರುವ ಟವಲ್ ಎತ್ತಿ ಗಾಳಿ ಬೀಸಿಕೊಳ್ಳುತ್ತಾ ಆಟ ಮುಂದುವರೆಸಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಆ ಮರದ ಆಯುಷ್ಯ ಮುಗಿಯಲಿದೆ ಎಂಬುದು ಅಮ್ಮನಿಗೆ ಗೊತ್ತಿತ್ತೇನೋ ಅವರಿಗೆ ಗೊತ್ತಿರಲಿಲ್ಲ.
ಗುಡಿಯಲ್ಲಿ ಗಂಟೆಗಳ ಶಬ್ಧ ಕೇಳಿತು ಅಲ್ಲಿಗೆ ಮಂಗಳಾರತಿ ಮುಗಿದಂತೆ ನಾಲ್ಕಾರು ಶಾಲಾ ಮಕ್ಕಳು ಸೇರಿದಂತೆ ಗುಡಿಯ ಒಳಗಿದ್ದವರಿಗೆ ಮಂಗಳಾರತಿ ತೀರ್ಥ ಪ್ರಸಾದ ಕೊಟ್ಟ ಮೇಲೆ ಶಾಲಾ ಮಕ್ಕಳು ಚೀಲದೊಂದಿಗೆ ಉತ್ತರದ ದಿಕ್ಕಿನಲ್ಲಿ ನಡೆಯಲು ಶುರು ಮಾಡಿದರು.
ಹೂಂ್ಞ ನೀವು ಬರ್ರಿ ತೀರ್ಥಕ್ಕೆ ಎಂದು ಫಣಿಭೂಷಣ ಗುಡಿಯ ಹೊರಗೆ ದೂರದಲ್ಲಿ ಇದ್ದ ಮಾದಿಗರಿಗೆ ಕರೆದ " ಇಲ್ಲ ಸಾಮಿ ನಾವು ಹತ್ರಕ್ಕೆ ಬರಾದಾ ? ಅವ್ವ ಸುಮ್ಮನಿರ್ತಾಳ ? ಬ್ಯಾಡ ಇಲ್ಲೇ ತಕಂಬನ್ನಿ ಭಂಡಾರ ತೀರ್ಥಾವಾ. ಅಂದರು ಫಣಿಭೂಷಣ ಗೊಣಗುತ್ತ ಅವರಿದ್ದಲ್ಲಿಗೆ ನಡೆದು ಬಂದು ಅವರ ಕೈ ತಾಗದಂತೆ ಮೇಲಿಂದ ಭಂಡಾರ ಉದುರಿಸಿ ಅವರು ತಂದಿದ್ದ ಲೋಟಗಳಿಗೆ ತೀರ್ಥ ಹಾಕಿ ಗುಡಿಯ ಒಳಗೆ ಹೋದ.
"ಏನ್ ಕಿಳ್ಳು ಹುಡುಗ್ರು ಮಾರಾಯ ಇವ್ರು ಅದೇನ್ ಓದ್ತಾವೋ ಏನೋ ? ಇದನ್ನೇನ್ರಲಾ ನಿಮ್ ಮೇಷ್ಟ್ರು ನಿಮಿಗೆ ಕಲ್ಸಿರೋದು" ಎಂದು ರಂಗಸ್ವಾಮಿಯವರು ಗದರಿಕೊಳ್ಳುವವರೆಗೆ ಆ ಹುಡುಗರು ಕೀಟಲೆ ಮಾಡುತ್ತಾ ,ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ ,ಜಗಳ ವಾಡುತ್ತಾ ರಸ್ತೆ ಎಲ್ಲಾ.... ನಮ್ಮದೇ ಎಂದುಕೊಂಡು ,ಕೆಲವೊಮ್ಮೆ ತಮ್ಮ ಕೈಚೀಲದಲ್ಲಿರುವ ಪುಸ್ತಕಗಳನ್ನು ಮೇಲೆಸೆದು ಕೆಳಗೆ ಬೀಳುವ ಮೊದಲೇ ಹಿಡಿಯುವ ಸಾಹಸ ಮಾಡುತ್ತಾ, ಜೋರಾಗಿ ಓಡೋ ಭರದಲ್ಲಿ ಮಹೇಶ ಮೈಲಿ ಕಲ್ಲಿಗೆ ಡಿಕ್ಕಿ ಹೊಡೆದ ಹುಡುಗರೆಲ್ಲ ಭಯದಿಂದ ಮಹೇಶನ ಹತ್ತಿರ ಹೋಗಿ ನೋಡಿದರು ತಲೆಯನ್ನು ಹಿಡಿದು ಮಹೇಶ ಮಾತನಾಡದೇ ಸುಮ್ಮನೆ ಕುಳಿತಿದ್ದ.ಹತ್ತಿರ ಬಂದ ಸತೀಶ ಮಹೇಶನ ತಲೆಸವರಿ ನೋಡಿದ ನೆತ್ತಿಯಲ್ಲಿ ಒಂದು ಉಂಡೆ ಗಾತ್ರದ ಉಬ್ಬು! ರಕ್ತ ಏನಾದರೂ ಬಂತಾ? ಚಿದಾನಂದ್ ಕೇಳಿದ ಇಲ್ಲ ಊದಿಕೊಂಡಿದೆ ಅಷ್ಟೇ. ಸತೀಶ ಹೇ ಇವನ ತಲೆ ಕಬ್ಬಣ ಕಣಪ್ಪ ಅಂದ ಚಿದಾನಂದ ಕಣ್ಣು ದಪ್ಪ ಮಾಡಿ ಉಬ್ಬು ಮೇಲೇರಿಸಿ ನುಡಿದ ,ಬರ್ರೋ ಸ್ಕೂಲ್ಗೆ ಟೈಮಾಗುತ್ತೆ ಅಂತ ಮತ್ತೆಅದೇ ತರಲೆ ಕೀಟಲೆ ಮಾಡುತ್ತಾ ರಾಜ್ಯ ಹೆದ್ದಾರಿ ೧೯ ರಲ್ಲಿ ನಡೆದು ಬಲಕ್ಕೆ ತಿರುಗಿ ಹೋದರು.
ಅದು ಯರಬಳ್ಳಿ ಅತೀ ಹೆಚ್ಚು ಎರೆಮಣ್ಣು ಇಲ್ಲದಿದ್ದರೂ ಎರೆ ಸೀಮೆ ಎಂದು ಕರೆಸಿಕೊಳ್ಳುವ ಈ ಹಳ್ಳಿ ಅತ್ತ ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಒಂದು ಸಾಧಾರಣವಾದ ಹಳ್ಳಿ .ಬೀದರ್ ಶ್ರೀರಂಗಪಟ್ಟಣ ರಾಜ್ಯಹೆದ್ದಾರಿ ಹಾದು ಹೋದ ಪರಿಣಾಮ ಸುತ್ತಮುತ್ತಲಿನ ಹಳ್ಳಿಗಳಿಗಿಂತ ತುಸು ಬೆಳವಣಿಗೆ ಕಂಡ ಹಳ್ಳಿ ಎಂಭತ್ತರ ದಶಕವಾದರೂ ಇತರೆ ಹಳ್ಳಿಗಳಿಗಿಂತ ಹತ್ತು ವರ್ಷಗಳ ಕಾಲ ನಮ್ಮ ಹಳ್ಳಿ ಮುಂದಿದೆ ಎಂದು ಊರ ಮುಂದಿನ ಅರಳಿ ಕಟ್ಟೆಯ ಮೇಲೆ ಕುಳಿತವರು ಆಗಾಗ್ಗೆ ಕೊಚ್ಚಿಕೊಳ್ಳುತ್ತಿದ್ದರು.
ಊರಿನ ಮುಂದೆ ಪೂರ್ವ ಭಾಗದಲ್ಲಿ ರಸ್ತೆ ಹಾದು ಹೋದ ಪರಿಣಾಮವಾಗಿ ಅದು ಅಲ್ಲಿನವರ ಭಾಷೆಯಲ್ಲಿ ಊರ ಮುಂದೆ ಎಂದು ಪ್ರಚಲಿತ. ರಸ್ತೆಯ ಇಕ್ಕೆಲಗಳಲ್ಲಿ ಪೈಪೋಟಿಗೆ ಎಂಬಂತೆ ಶೆಟ್ಟರ ಅಂಗಡಿಗಳು ಬಣ್ಣ ಬಳಿದುಕೊಂಡು, ಮದುವಣಗಿತ್ತಿಯಂತೆ ಸಿಂಗರಿಸಕೊಂಡು ತಲೆಎತ್ತಿದ್ದವು.
ಅಲ್ಲೊಂದು ಇಲ್ಲೊಂದು ತುಂಬಾ ಹಳೆಯ ಬೇವಿನ ಮರಗಳು ಊರಿನ ಮುಂದಕ್ಕೆ ನೈಸರ್ಗಿಕವಾಗಿ ತೋರಣ ಕಟ್ಟಿದಂತೆ ಊರಿನ ಅಂದ ಹೆಚ್ಚಿಸಿದ್ದವು ಅದರಲ್ಲೂ ಮಾರಮ್ಮನ ದೇವಾಲಯದ ಮುಂದೆ ಇದ್ದ ಮರಕ್ಕೆ ಒಂದು ವಿಶಿಷ್ಠವಾದ ಸೊಬಗು ಮತ್ತು ಸೌಂದರ್ಯದ ಪರಿಣಾಮವಾಗಿ ಜನರು ಕೈಮುಗಿಯುವುದು ಪೂಜೆ ಮಾಡುವುದು ನಡೆಯುತ್ತಲೇ ಇತ್ತು. ಈಗೀಗ ಜನರಲ್ಲಿ ಆ ಮರದ ಕುರಿತಾದ ಕಾಳಜಿ ಇನ್ನೂ ಹೆಚ್ಚಾಗಲು ಶುರುವಾಯಿತು. ಹಿರಿಯೂರಿನ ಕೆಲ ಅಧಿಕಾರಿಗಳು ಬಂದು ಟೇಪ್ ಹಿಡಿದು ಅಳತೆ ಮಾಡಿ ಕೆಂಪು ಬಣ್ಣದ ಮೇಲೆ ಮನೆಗಳ ಮೇಲೆ ಪ್ಲಸ್ ರೀತಿಯಲ್ಲಿ ಗುರುತು ಮಾಡುವಾಗ ಕೆಲವರು ಯಾಕೆ ಎಂದು ವಿರೋಧಿಸಿ ಕೇಳಿದಾಗ "ನಮಗೇನು ಗೊತ್ತು ಸಾಹೇಬರು ಹೇಳಿದರೆ ನಾವು ಹಾಕ್ತಿವಿ ಅಷ್ಟೇ" )ಊರಿನಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಪುಡಿರಾಜಕೀಯ ಮಾಡುವ ರಾಜಶೇಖರ ಅಲಿಯಾಸ್ ರಾಜಿ ರಸ್ತೆ ಅಗಲ ಮಾಡುತ್ತಾರೆ (ಎನೊ ಯಾರೋ ಅಂಗಂದಿದ್ರ)ಈ ಶೆಟ್ಟರ ಅಂಗಡಿಗಳು ಮತ್ತು ಈ ಮರಗಳು ಹೋಗಬಹುದು ಅಂದ ಅಂದಿನಿಂದ .ಊರಮುಂದೆ ಕುಳಿತ ,ಮನೆಯಲ್ಲಿ ಕುಳಿತ ಎಲ್ಲರ ಬಾಯಲ್ಲಿ ರಸ್ತೆಯ ಅಗಲ ಮಾಡುವ ಕುರಿತೇ ಮಾತು ಆಗಂತೆ ಈಗಂತೆ ಅವರ ಅಂಗಡಿ ಹೋಗುತ್ತಂತೆ ಇವರ ಅಂಗಡಿ ಅರ್ಧ ಹೋಗುತ್ತಂತೆ ಈ ಬೇವಿನ ಮರ ಹೋಗುತ್ತಂತೆ ಎಂದು ತಳ ಬುಡವಿಲ್ಲದ ಬರೀ ಅಂತೆ ಕಂತೆಗಳ ಸುದ್ದಿ ಯರಬಳ್ಳಿ ಮತ್ತು ಸುತ್ತ ಮುತ್ತಲಿನ ಜನರ ಬಾಯಲ್ಲಿ ಹರಿದಾಡುತ್ತಿತ್ತು .ಅಂದಿನಿಂದ ಜನರಿಗೆ ಮಾರಮ್ಮನ ದೇವಾಲಯದ ಮುಂದಿರುವ ಮರದ ಮೇಲೆ ಒಂದು ರೀತಿಯ ಭಯ ಮತ್ತು ಭಕ್ತಿ ಮೂಡಿ ಜನರು ಆ ಮರದ ಹತ್ತಿರ ಹೋದಂತೆ ಭಾವುಕರಾಗುತ್ತಿದ್ದರು
ಮುಂದುವರೆಯುವುದು....
*ಸಿ ಜಿ ವೆಂಕಟೇಶ್ವರ*
No comments:
Post a Comment