18 May 2020

ಲಾಕ್ಡೌನ್ ನಲ್ಲಿ ನಾನೇನು ಮಾಡುತ್ತಿರುವೆ?



ಲಾಕ್ ಡೌನ್ ಸಮಯದ ಸದುಪಯೋಗ
ಲೇಖನ
ಕರೋನ ಪ್ರಯುಕ್ತ ಲಾಕ್ ಡೌನ್‌‌ ಇರುವ ಈ ಸಂಧರ್ಭದಲ್ಲಿ ನಾನು ನನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನನಗೆ ವರವಾಗಿದೆ ಎಂದು ಭಾವಿಸಿರುವೆ.
ಈ ಮೊದಲು ತಂದಿಟ್ಟು ಓದಲಾಗದ ಪುಸ್ತಕಗಳನ್ನು ಓದಲು ಆರಂಬಿಸಿ "ಸ್ವಾಮಿಜಗದಾತ್ಮಾನಂದಜಿ" ಅವರ ಬರೆದ "ಬದುಕಲು ಕಲಿಯಿರಿ" ಪುಸ್ತಕ ಓದಿ ಮುಗಿಸಿ ಈಗ  ರಿಚರ್ಡ್ ಕಾರ್ಲಸನ್ ಬರೆದಿರುವ "ಎಷ್ಟೊಂದು ಸೊಗಸು ಈ ಬದುಕು ಎಂಬ ಪುಸ್ತಕ ಓದಿದೆ.
"ಕಾನನ‌ ಕಥೆಗಳು" ಎಂಬ ಪರಿಸರದ ಕುರಿತಾದ ಕಥೆಗಳಿರುವ ಪುಸ್ತಕ ಓದಿದೆ. ನಾಗರಾಜ ಜಿ ನಾಗಸಂದ್ರ ರವರ "ಅಂತರ" ಕಾದಂಬರಿ ಓದಿದೆ. ವಿದ್ಯಾಧರ ದುರ್ಗೇಕರ್ ರವರ ಕಾದಂಬರಿ "ಜೀವಾತ್ಮಗಳ ವಿಕ್ರಯ ", ಕಂನಾಡಿಗ ನಾರಾಯಣ ರವರ ಕಾದಂಬರಿ " ದ್ವಾಪರ " ರವಿ ಬೆಳಗೆರೆ ರವರ ಕಾದಂಬರಿ " ಹೇಳಿ ಹೋಗು ಕಾರಣ " ಪು ತಿ ನರಸಿಂಹಾಚಾರ್ ರವರ ಗೀತನಾಟಕ  ಗೋಕುಲ ನಿರ್ಗಮನ ,ಕುವೆಂಪು ರವರ " ಚಿತ್ರಾಂಗಧ" ,ಶಿವರಾಮ ಕಾರಂತರ ಕಾದಂಬರಿ "ಚೋಮನ ದುಡಿ " ಜೋಗಿಯವರ " ಜೋಗಿ ಕಥೆಗಳು " ಇವುಗಳನ್ನು ಓದಿ ಕೆಲ ಪುಸ್ತಕಗಳಿಗೆ ನನ್ನ ಬ್ಲಾಗ್ ನಲ್ಲಿ ವಿಮರ್ಶೆ ಬರೆದಿರುವೆ.
ಲಾಕ್ಡೌನ್ ಇಲ್ಲದಿದ್ದರೆ ಇದೇ ತಿಂಗಳಲ್ಲಿ  ಯರಬಳ್ಳಿ ಮಾರಮ್ಮನ ಜಾತ್ರೆಯ ಸಮಯದಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ನಾಟಕದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದೆ ಈಗ ಮನೆಯಲ್ಲಿಯೇ ಆಗೊಂದು ಈಗೊಂದು ಡೈಲಾಗ್ ,ಹೇಳಿ ಮನೆಯವರ ಮನ ರಂಜಿಸುತ್ತಿರುವೆ .
ನಾನೊಬ್ಬ ಹವ್ಯಾಸಿ ಹಾಡುಗಾರ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಯಜಮಾನ ಚಿತ್ರದ "ಯಾರೇ ಬಂದರೂ ಎದುರ್ಯಾರೆ ನಿಂತರೂ .....ಈ ಹಾಡಿನ ಕರೋಕೆಯೊಂದಿಗೆ ಹಾಡಿ ಫೇಸ್ಬುಕ್ ಮತ್ತು ಯೂಡೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದೆ. ನನ್ನ ಸ್ನೇಹಿತರು ನನ್ನ ಹಾಡು ಕೇಳಿ ಖುಷಿ ಪಟ್ಟರು,ನನಗೂ ಸಂತಸವಾಯಿತು.
ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು  ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನೂ ಮುಗಿದಿಲ್ಲ ಆದ್ದರಿಂದ ನನ್ನ ಶಾಲೆಯ ಹತ್ತನೆಯ ತರಗತಿಯ ಮಕ್ಕಳಿಗೆ ಆಗಾಗ್ಗೆ ಆನ್ಲೈನ್ ತರಗತಿಯ ಮೂಲಕ ಮಾರ್ಗದರ್ಶನ ಮಾಡುತ್ತಿರುವೆ.
ಜಿಲ್ಲಾ ಶಿಕ್ಷಣ ಮತ್ತು ತರಭೇತಿ ಸಂಸ ತುಮಕೂರು ಇವರ ಸಹಕಾರದಿಂದ ತುಮಕೂರು ಜಿಲ್ಲೆಯ ಎಲ್ಲಾ ಮಕ್ಕಳಿಗೆ  ಪರೀಕ್ಷೆ ಬರೆಯುವ ರೀತಿ ಮತ್ತು ವಿಷಯದ ಬಗ್ಗೆ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪನ್ಮೂಲಗಳ ವ್ಯಕ್ತಿಯಾಗಿ ಪಾಲ್ಗೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡಿದೆನು.
ಹಲವಾರು ಸಾಹಿತ್ಯದ ಗುಂಪುಗಳು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕಥೆ,ಕವನ, ಹನಿಗವನ,ಚುಟುಕುಗಳು, ಪುಸ್ತಕ ವಿಮರ್ಶೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ ಬಹುಮಾನವನ್ನು ಪಡೆದಿರುವೆನು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೆಸರಿನ ವೇದಿಕೆಯ ಜಿಲ್ಲಾ ಕಾರ್ಯದರ್ಶಿಯಾಗಿ ರಾಜ್ಯ ಮಟ್ಟದ ಆನ್ಲೈನ್ ಕವನ ರಚನೆ ಮತ್ತು ವಾಚನ ಸ್ಪರ್ಧೆಯ ಸಂಘಟನೆ ಮಾಡಿ ವಿಜೇತರಿಗೆ ನಗದು ಬಹುಮಾನವನ್ನು ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಮೊದಲು‌ ಯೋಗ ,ಧ್ಯಾನ, ಪ್ರಾಣಾಯಾಮ ಮಾಡಲು ಮನಸ್ಸಿದ್ದರೂ ಸಮಯದ ಅಭಾವದ ನೆಪವೊಡ್ಡಿ ಅದರಲ್ಲಿ ತೊಡಗಲು ಆಗಿರಲಿಲ್ಲ ,ಈಗ ಪ್ರತಿದಿನ ಯೋಗ, ಪ್ರಾಣಾಯಾಮ, ಧ್ಯಾನ ಮಾಡುವೆ.
ಮನೆಯವರು ಮತ್ತು ಮಕ್ಕಳ ಜೊತೆ ಪ್ರತಿದಿನ ಸಂಜೆ ಶಟಲ್ ಬ್ಯಾಡ್ಮಿಂಟನ್ ಆಟ ಆಡುವೆ.
ಹವ್ಯಾಸಿ ಲೇಖಕನಾದ ನಾನು ಈ ಲಾಕ್ಡೌನ್ ಅವಧಿಯಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದು ಅವುಗಳು ಪ್ರಜಾವಾಣಿ, ವಿಶ್ವವಾಣಿ,ಪ್ರಜಾಪ್ರಗತಿ, ಪ್ರತಿನಿಧಿ, ಹಾಗೂ ಇತರೆ ಪತ್ರಿಕೆಗೆಳಲ್ಲಿ ಪ್ರಕಟವಾಗಿವೆ.
ನಾನೊಬ್ಬ ಹವ್ಯಾಸಿ  ಬ್ಲಾಗರ್ ಆಗಿರುವುದರಿಂದ ನನ್ನ ಬ್ಲಾಗ್ ನಲ್ಲಿ  ಕವನ, ನ್ಯಾನೋ ಕಥೆ,ಶೈಕ್ಷಣಿಕ ಲೇಖನ, ಗಜ಼ಲ್, ಶಿಶುಗೀತೆ,ಹನಿಗವನ,ಮುಂತಾದ ಸಾಹಿತ್ಯದ ರಚನೆ ಮಾಡಲು ನನಗೆ ಈ ಕಾಲ ಬಹಳ ಅನುಕೂಲವಾಯಿತು.ಲಾಕ್ ಡೌನ್ ನ ಈವರೆಗಿನ  ದಿನದಲ್ಲಿ ದಿನಕ್ಕೆ ಸರಾಸರಿ ಎರಡು ಸಾಹಿತ್ಯದ ರಚನೆ ಮಾಡಿರುವುದು, ಮತ್ತು ಇದಕ್ಕೆ ಪ್ರಪಂಚಾದ್ಯಂತ ಇರುವ ಓದುಗರು ಓದಿ ಆಸ್ವಾದಿಸಿ ಮೆಚ್ಚುಗೆ ಸೂಚಿಸಿರುವುದು  ಬಹಳ ಸಂತಸ ನೀಡಿದೆ. ಇತ್ತೀಚೆಗೆ ಒಂದು ಲಕ್ಷದ ಓದುಗರು ನನ್ನ ಬ್ಲಾಗ್ ಓದಿರುವುದು ಪ್ರಪಂಚದ ವಿವಿಧ ದೇಶದ ಕನ್ನಡಿಗರು ನನ್ನ ಬ್ಲಾಗ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿರುವುದು ಮನಕಾನಂದ ನೀಡಿದೆ   ನೀವು ಲಾಕ್ ಡೌನ್ ಸಮಯದಲ್ಲಿ ನನ್ನ ಬ್ಲಾಗ್ ಗೆ ಭೇಟಿ ನೀಡಿ ನನ್ನ ಬರಹಗಳನ್ನು ಓದಬಹುದು.
ಬ್ಲಾಗ್ ವಿಳಾಸ sridevitanya.blogspot. com
ವಂದನೆಗಳೊಂದಿಗೆ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529

No comments: