18 February 2020

ನಾವೂ ಬದಲಾಗಬೇಕಿದೆ (ಶೈಕ್ಷಣಿಕ ಲೇಖನ)

ನಾವೂ ಬದಲಾಗಬೇಕಿದೆ

"ನನ್ನ ದೇಶದ ಎಲ್ಲಾ ಪ್ರಜೆಗಳು ಗುಣಮಟ್ಟದ ಶಿಕ್ಷಣ ಪಡೆದಾಗ ಈ ದೇಶದ ಬಾವುಟ ಇನ್ನೂ ಎತ್ತರಕ್ಕೆ ಹಾರುವುದು.
ದೇಶದ ಎಲ್ಲ ಪ್ರಜೆಗಳು ಅರೋಗ್ಯಹೊಂದಿದಾಗ ನನ್ನ ಭಾರತದ ಧ್ವಜ ಹೆಮ್ಮೆಯಿಂದ ಹಾರಾಡುವುದು."

ಮೂರನೇ ಬಾರಿಗೆ ಮುಖ್ಯ ಮಂತ್ರಿಯಾಗಿ ಪದಗ್ರಹಣ ಮಾಡುತ್ತಾ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ರವರು ಈಗೆ ಭಾಷಣ ಮಾಡಿದ್ದು ಕೇಳಿ ಆಶ್ಚರ್ಯಕರವಾಗಿ ಕಂಡುಬರಲಿಲ್ಲ.ಇದೇ ಮಾತನ್ನು ಇತರೆ ರಾಜಕಾರಣಿಗಳು ಹೇಳಿದ್ದರೆ ಅದು ಹತ್ತರ ನಡುವೆ ಇನ್ನೊಂದು ಆಶ್ವಾಸನೆ, ಪೊಳ್ಳು ಭರವಸೆ, ಮತದಾರರ ಓಲೈಕೆಯ ಮಾತುಗಳು ಎಂದು ಜರೆಯಬಹುದಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ದೆಹಲಿಯ ಶಾಲೆಗಳ ಚಿತ್ರಣ ನೋಡಿದವರಿಗೆ .ಈ ಮೇಲಿನ ಮಾತಿನಲ್ಲಿ ಸತ್ಯವಿದೆ ಎನಿಸದಿರದು.ದೇಶದ ಬಹುತೇಕ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ನೋಡಿದಾಗ ಸರ್ಕಾರಿ ಶಾಲೆಗಳನ್ನು ಕಂಡರೆ ಮೂಗು ಮುರಿಯುವವರೇ ಹೆಚ್ಚು. ಅದರೆ ದೆಹಲಿ ಸರ್ಕಾರಿ ಶಾಲೆಗಳನ್ನು ಕಂಡ ಮೇಲೆ ಸರ್ಕಾರಿ ಶಾಲೆಗಳ ಬಗ್ಗೆ ನಮಗಿರುವ ಮನೋಭಾವ ಖಂಡಿತವಾಗಿಯೂ ಬದಲಾಗುತ್ತದೆ.
ಅಷ್ಟಕ್ಕೂ ಈ ಬದಲಾವಣೆ ಸುಲಭವಾಗಿ ,ಮತ್ತು ಶೀಘ್ರವಾಗಿ ಆಯಿತೆ ? ಖಂಡಿತವಾಗಿ ರಾತ್ರೋರಾತ್ರಿ ಇಂತಹ ಬದಲಾವಣೆಗಳನ್ನು ಮಾಡಲು ಸಾದ್ಯವಿಲ್ಲ. ಇದಕ್ಕೆ ಬದ್ದತೆ ,ತಾಳ್ಮೆ, ಇಚ್ಛಾ ಶಕ್ತಿ ಅಗತ್ಯವಾದ ಅಂಶಗಳಾಗಿದ್ದವು.
ದೆಹಲಿಯ ಮಾಜಿ ಸಂಸದೆಯಾದ ಆತಿಶಿಯವರ ಮಾತುಗಳಲ್ಲಿ ಹೇಳುವುದಾದರೆ. " ಕಳೆದ ಐದು ವರ್ಷಗಳಲ್ಲಿ ದೆಹಲಿಯ ಶಾಲೆಗಳ ಚಿತ್ರಣ ಬದಲಿಸಲು ,ಸರ್ಕಾರ, ಶಿಕ್ಷಕರು, ಸ್ವಯಂಸೇವಾ ಸಂಘ ಸಂಸ್ಥೆಗಳು, ಪೋಷಕರು, ಅಧಿಕಾರಿಗಳು, ಲಾಭೇತರ ಸಂಸ್ಥೆಗಳು, ಟೊಂಕ ಕಟ್ಟಿ ನಿಂತ ಪರಿಣಾಮವಾಗಿ ಇಂದು ದೆಹಲಿಯ ಶಾಲೆಗಳು ದೇಶದಲ್ಲಿ ಮನೆ ಮಾತಾಗಿವೆ."

ದೆಹಲಿ ಶಾಲೆಗಳು ಬದಲಾವಣೆ ಆಗಿದ್ದೇಗೆ?

ಮೊದಲು ದೆಹಲಿಯ ಶಾಲೆಗಳು ಇತರೆ ಶಾಲೆಗಳ ರೀತಿ ಸರಿಯಾದ ಕಟ್ಟಡವಿಲ್ಲದ ,ಶೌಚಾಲಯ ಇಲ್ಲದ ,ಮೂಲಭೂತ ಸೌಕರ್ಯಗಳು ಇಲ್ಲದ ,ಇತ್ಯಾದಿ ಇಲ್ಲದ ಶಾಲೆಗಳು ಆಗಿದ್ದವು .ಇಂತಹ ಶಾಲೆಗಳು ಬದಲಾವಣೆ ಮಾಡಲು ಕ್ರಮೇಣವಾಗಿ ಅಪೇಕ್ಷಿತ ಬದಲಾವಣೆ ತರಲು ಪಣ ತೊಡಲಾಯಿತು.ಮೊದಲು ಅಲ್ಲಿನ ಶೌಚಾಲಯಗಳನ್ನು ಸ್ವಚ್ಚ ಗೊಳಿಸದ ಕಾರ್ಯ ಮಾಡಲಾಯಿತು. ಆರಂಭದಲ್ಲಿ .ಮಕ್ಕಳಿಂದ ,ಶಿಕ್ಷಕರಿಂದ ಸಮುದಾಯದ, ಸಹಕಾರ ಸಿಗದಿದ್ದರೂ ,ಪ್ರಯತ್ನ ಮುಂದುವರೆಸಿ ಶಾಲೆಗಳ ಶೌಚಾಲಯ ಸ್ವಚ್ಚವಾಗಿ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು.

ಜಗಮಗಿಸುವ ಶಾಲೆಗಳ ಕಟ್ಟಡಗಳು
ದೆಹಲಿಯ
ಸರ್ಕಾರಿ ಶಾಲೆಗಳ ಮಕ್ಕಳು ಇತರೆ ಖಾಸಗಿ ಶಾಲೆಗಳ ಮಕ್ಕಳ ನೋಡಿ ಅವರಂತಹ ಶಾಲೆಗಳ ‌ಕಟ್ಟಡ ನಮಗಿಲ್ಲ ಮೂಲಭೂತವಾದ ಸೌಕರ್ಯಗಳಿಲ್ಲ ಎಂದು   ಕೀಳರಿಮೆ ಪಡುತ್ತಿದ್ದರು .ಇದನ್ನು ಮನಗಂಡ ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರದ ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲಾ ಕಟ್ಟಡಗಳು ಹೊಸದಾಗಿ ನಿರ್ಮಾಣ ಮಾಡಲ್ಪಟ್ಟವು .ಕೆಲ ಶಾಲೆಗಳು ಸುಣ್ಣ ಬಣ್ಣ ಕಂಡು ಕಂಗೊಳಿಸಿದವು, ಮೂಲಭೂತ ಸೌಲಭ್ಯಗಳು ಸಿಗಲಾರಂಬಿಸಿದವು. ಶಾಲೆಗಳು ಆಕರ್ಷಣೆಯ ತಾಣಗಳಾಗಿ ಕ್ರಮೇಣವಾಗಿ ದಾಖಲಾತಿ ಹೆಚ್ಚಾಯಿತು.

ಇರುವ ವ್ಯವಸ್ಥೆಯಲ್ಲಿ ಚಾಂಪಿಯನ್ ಹುಡುಕಾಟ.

ಶಾಲೆಗಳ ಮೂಲಭೂತ ಸೌಕರ್ಯಗಳನ್ನು ನೀಡಿದ ಮಾತ್ರಕ್ಕೆ ಆ ಶಾಲೆಗಳ ಪ್ರಗತಿ ಸಾದ್ಯವಿಲ್ಲ ಗುಣಮಟ್ಟದ ಶಿಕ್ಷಕರ ಅಗತ್ಯ ಕೂಡ ಮುಖ್ಯ ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವ್ಯವಸ್ಥೆಯ ಭಾಗದಿಂದ ಚಾಂಪಿಯನ್ ಶಿಕ್ಷಕರ ಹುಡುಕು ಕಾರ್ಯ ಆರಂಭವಾ ಯಿತು. ಎಲ್ಲಾ ರಂಗದಲ್ಲಿ ಇರುವಂತೆ ಸಾಮಾನ್ಯ ಸಂಭಾವ್ಯ ವಕ್ರರೇಖೆ (normal probability curve) ಶಿಕ್ಷಣ ಕ್ಷೇತ್ರದಲ್ಲಿ ಅನ್ವಯ ಮಾಡುವುದಾದರೆ 20% ಶಿಕ್ಷಕರು ಅತ್ಯುತ್ತಮ ಕೌಶಲಗಳನ್ನು ಹೊಂದಿರುವ, ತಂತ್ರಜ್ಞಾನದ ತಿಳುವಳಿಕೆ ಹೊಂದಿರುವ  ಅತೀ ಬದ್ಧತೆಯ ಶಿಕ್ಷಕರು ಇರುತ್ತಾರೆ, 60% ಶಿಕ್ಷಕರು ಸಮಾನ್ಯವಾದ ಸರಾಸರಿಯಾಗಿ ಉತ್ತಮ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವವರು. ಇನ್ನುಳಿದ 20% ಶಿಕ್ಷಕರು ವಿವಿಧ ಕಾರಣದಿಂದಾಗಿ ಕಡಿಮೆ ಸಾಮರ್ಥ್ಯವನ್ನು ಹೊಂದಿ ಬೋಧನೆ ಮಡುವವರು. ದೆಹಲಿಯಲ್ಲಿ ಮೊದಲ 20% ಶಿಕ್ಷಕರಿಗೆ ಮೊದಲು ಹೆಚ್ಚಿನ ತರಭೇತಿಯನ್ನು ನೀಡ ಉಳಿದ ಶಿಕ್ಷಕರಿಗೆ ನಂತರ ಪ್ರೇರೇಪಣೆ ನೀಡಿ ಇರುವ ಶಿಕ್ಷಕರನ್ನು  ಗುಣಮಟ್ಟದ ಶಿಕ್ಷಕರನ್ನಾಗಿ ಪರಿವರ್ತಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ನಾಂದಿ ಹಾಡಲಾಯಿತು.

ಪಠ್ಯ ಕ್ರಮ

ದೇಶದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಪಠ್ಯಕ್ರ ಚೌಕಟ್ಟಿನ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ.ಪಠ್ಯಕ್ರಮ ಇದ್ದಂತೆ ದೆಹಲಿಯ ಶಾಲೆಗಳು ಸಹ‌ಇದೇ ಪಠ್ಯ ಕ್ರಮದ ಜೊತೆಗೆ
ಶಾಲೆಗಳಲ್ಲಿ  "ಸಂತಸ" ಮತ್ತು "ಉದ್ಯಮಗಾರಿಕೆ" ಎಂಬ ಹೊಸ ಪಠ್ಯ ಸೇರಿಸುವ ಮೂಲಕ ಶಾಲೆಗೆ ಸಂತಸದಾಯಕ ಕಲಿಕಾ ವಾತಾವರಣ ಸೃಷ್ಟಿ ಮಾಡಿ ತಮ್ಮ ಮುಂದಿನ‌ ಜೀವನವನ್ನು ರೂಪಿಕೊಳ್ಳುವ ಶಿಕ್ಷಣ ನೀಡಲು ಶಾಲೆಗಳು ಸಜ್ಜಾದವು ಇದರ ಪರಿಣಾಮವಾಗಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಹೆಚ್ಚು ಆಕರ್ಷಿತವಾದವು. ದೇಶದ ಮನೆಮಾತಾದವು.

ನಮ್ಮಲ್ಲೇನಾಗಬೇಕು.

ನಮ್ಮ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಕೊಠಡಿಗಳ ಕೊರತೆಯೇನೂ ಇಲ್ಲ ಆದರೆ ಕೆಲವೆಡೆ ಕಟ್ಟಡಗಳ ಶಿಥಿಲವಾಗಿರುವಂತವುಗಳ ದುರಸ್ತಿ ಮಾಡಿ ಸುಣ್ಣ ಬಣ್ಣ ಹೊಡೆದು ಮೂಲಭೂತ ಸೌಕರ್ಯಗಳನ್ನು ಹೆಚ್ಚು ನೀಡಿ ಹೊರಗಿನಿಂದ ನೋಡಿದಾಕ್ಷಣ ಆಕರ್ಷಣೆ ಮಾಡುವಂತೆ ಕಟ್ಟಡಗಳು ನವೀಕರಣಗೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ರಾಜ್ಯದ ಹಲವು ಕಂಪನಿಗಳಾದ ಇನ್ಫೋಸಿಸ್ , ವಿಪ್ರೋ,ಇನ್ನೂ ಮುಂತಾದ ಕಂಪನಿಗಳು ಕಾರ್ಪೊರೇಟ್ ಸಮಾಜಿಕ ಜವಾಬ್ದಾರಿ ಅಂಗವಾಗಿ ಹಲವಾರು ಶಾಲೆಗಳ ದತ್ತು ತೆಗೆದುಕೊಳ್ಳುವ ಮೂಲಕ ಮೂಲಭೂತ ಸೌಕರ್ಯ ವೃದ್ಧಿಗೆ ತಮ್ಮ ಯೋಗಾದಾನ ನೀಡಿವೆ.ಇನ್ನೂ ಮಾನ್ಯ ಶಿಕ್ಷಣ ಸಚಿವರು ಶಾಲೆಗಳ ಮೂಲಭೂತ ಸೌಕರ್ಯಗಳ ಮತ್ತು ಶೈಕ್ಷಣಿಕ ಅಗತ್ಯ ಕುರಿತಾದ ಸಮಾಜ ಮತ್ತು ಶಾಲೆಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ಒಂದು ಆಪ್ ಬಿಡುಗಡೆ ಮಾಡುವುದಾಗಿ‌ ಹೇಳಿರುವುದು ಸ್ವಾಗತಾರ್ಹ.
ನಮ್ಮಲಿ ಶಿಕ್ಷಕರ ಮಕ್ಕಳ ಅನುಪಾತ ಇತರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿದೆ ಬಹುದಿನದ ಬೇಡಿಕೆಯಂತೆ ಇದು ಎಲ್ಲಾ ಹಂತದಲ್ಲಿ ಕಡಿಮೆಯಾಗಬೇಕಿದೆ.ಪರೀಕ್ಷಾ ವ್ಯವಸ್ಥೆಯು ಸಹ ಅಮೂಲಾಗ್ರ ಬದಲಾಗಬೇಕಿದೆ. ಪಾಸು ನಪಾಸು ಎಲ್ಲಾ ಹಂತದಲ್ಲಿ ಇದ್ದರೆ ಉತ್ತಮ.
ಇನ್ನೂ ನಮ್ಮ ರಾಜ್ಯದಲ್ಲಿ ಹಲವು ಹಂತದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಶಿಕ್ಷಕರ ನೇಮಕಾತಿ ಆಗುವುದರಿಂದ  ಬೇರೆ ರಾಜ್ಯಕ್ಕಿಂತ ಬುದ್ದಿವಂತ ಶಿಕ್ಷಕರು ಇರುವುದು ಹಲವು ಸಮೀಕ್ಷೆಗಳ ಮೂಲಕ ಸಾಬೀತಾಗಿದೆ. ಈ ಶಿಕ್ಷಕರಿಗೆ ದೆಹಲಿಯಲ್ಲಿ ನೀಡಿದಂತೆ ವಿವಿದ ತರಭೇತಿಯನ್ನು ನೀಡಿ ಪ್ರೇರಣೆ ನೀಡಬೇಕು.
ದೆಹಲಿಯ ಶಾಲೆಗಳ ಪ್ರಗತಿಗೆ ಸಮುದಾಯದ ಸಹಕಾರ ಮಹತ್ವದ್ದು ನಮ್ಮಲ್ಲೂ SD MC ಗಳು ಇದ್ದು ಅವು ಶಿಕ್ಷಣ, ಮಕ್ಕಳು, ಶಾಲೆಗಳ ಅಭಿವೃದ್ಧಿ ಗೆ ಗಮನ‌ ನೀಡದೆ ಬಹುತೇಕ ಕಡೆ ರಾಜಕೀಯದ ಪ್ರಯೋಗಶಾಲೆಗಳಾಗಿರುವುದು ವಿಪರ್ಯಾಸದ ಸಂಗತಿ .ಈ ಸಮಿತಿಗಳು ತಮ್ಮ ನಿಜವಾದ ಜವಾಬ್ದಾರಿಗಳನ್ನು ಅರಿತು ಶಾಲೆಗಳ ಪ್ರಗತಿಗೆ ಶ್ರಮಿಸಬೇಕಿದೆ.
ಅದೃಷ್ಟವಶಾತ್ ಇಂದು ನಮಗೆ ಬದ್ದತೆಯಿರುವ  ಒಳ್ಳೆಯ ಶಿಕ್ಷಣ ಮಂತ್ರಿಗಳು ಸಿಕ್ಕಿದ್ದಾರೆ. ಉತ್ತಮ ಅಧಿಕಾರಿಗಳ ವರ್ಗವಿದೆ.ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಘೋಷಣೆ ಆಗುವ ಈ ಪರ್ವ ಕಾಲದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಿ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಇತರೆ ರಾಜ್ಯಗಳು ಅನುಕರಣೆ ಮಾಡುವಂತೆ ಮಾಡಲು ಎಲ್ಲರ ಪ್ರಾಮಾಣಿಕ ಪ್ರಯತ್ನ ಅಗತ್ಯ

ಸಿ ಜಿ‌ ವೆಂಕಟೇಶ್ವರ

No comments: