11 February 2020

ಯಾವಾಗ? (ಕವನ)

*ಯಾವಾಗ?*

ತನ್ನ ಮನೆ ಕಸವ ತೆಗೆದು
ಪರರ ಮನೆಯ ಮುಂದೆ,
ಬೀದಿಗೆ ಹಾಕುವ ಮನಸ್ಸಲ್ಲೆ
ನಾನು ಸ್ವಚ್ಚ ಮಾನವ ಎಂಬ
ಹುಸಿ ಆತ್ಮ ಪ್ರೌಢಿಮೆ ಬೇರೂರುತ್ತಿದೆ.

ಮೇಲು ಕೀಳು
ಜಾತಿ ಮತದ ಕಳೆಯು ಹೆಚ್ಚಾಗಿ
ನಾ ಹೆಚ್ಚು ನೀ ಕಡಿಮೆ
ಅವನು ಸರಿಯಿಲ್ಲ ಎಂಬ
ಸಂಕುಚಿತ ಮನೋಭಾವ ಬೇರೂರುತ್ತಿದೆ.

ಪರೋಪಕಾರಂ ಇದಮಿತ್ತಂ ಶರೀರ
ಎಂಬ ಕಲ್ಪನೆ ಕ್ರಮೇಣವಾಗಿ ಮಾಯವಾಗಿ
ನಾನಿದ್ದರೆ ನೀನು ,ನಾನೇ ಮುಖ್ಯ ಎಂಬ
ಸ್ವಾರ್ಥ ಎಲ್ಲೆಡೆ ಬೇರೂರುತ್ತಿದೆ.

ಲೌಕಿಕ ಸುಖದ ಹಿಂದೆ ಬಿದ್ದು
ಅಲೌಕಿಕದ ಆತ್ಮಸಂತೋಷವ
ಕಡೆಗಣಿಸುವ ಮನೋಭಾವನೆ
ಬೇರೂರುತ್ತಿದೆ .

ಸರ್ವೇ ಭದ್ರಾಣಿ ಪಶ್ಯಂತು ಎಂಬ
ಭಾವನೆ ಮರೆಯಾಗಿ ದುಃಖದಲ್ಲಿರುವವರ
ನೋಡಿ ಸೆಲ್ಪಿ ವೀಡಿಯೋ ಮಾಡುವ
ಸಂಸ್ಕೃತಿಯ ಬೇರೂರುತ್ತಿದೆ.

ಬೇರೂರುಬೇಕಿದ್ದ ಪ್ರೀತಿ, ದಯೆ,ಕರುಣೆ,ಸಹಕಾರ ಸಹಬಾಳ್ವೆ, ಅನುಕಂಪಗಳು.ಮೊಳಕೆಯೊಡಲು ಸಹ
ಬಿಡದ ನಾವು ನಿಜವಾದ ಮಾನವೀಯ ಸಮಾಜ ನಿರ್ಮಿಸುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*

No comments: