07 March 2019

ಶುಕ್ರದೆಸೆ( ಕವನ)

         *ಶುಕ್ರದೆಸೆ?*


ಮೊಟ್ಟೆಯಿಂದ ಹೊರಬಂದು
ಜೀವತಳೆದಾಗ ಏನೋ ಆನಂದ
ಮಿಲಿ ಮೀಟರ್ ಗಾತ್ರದ
ಜೀವಿಗೆ ಸೊಪ್ಪು ಹಾಕಿದ
ದಣಿಯ ನೆನೆದು
ಸಂತಸಸಗೊಂಡು
ಮೇಯುತ ಪೊರೆಬಿಡುತ
ಜೀವನ ಮುಂದುವರೆಯಿತು.

ಜ್ವರದಿಂದ ಜ್ವರಕೆ
ಬೆಳೆಯುತ
ಮಿಲೀಮೀಟರ್ ಸೆಂಟಿಮೀಟರ್
ಆದದ್ದು ತಿಳಿಯಲೇ ಇಲ್ಲ
ನಾಲ್ಕನೇ ಜ್ವರ ದಾಟಿ
ಹಣ್ಣಾಗಿ ಬಂಗಾರದ ಬಣ್ಣ
ಕಂಡು ಮೈಪುಳಕ.

ಶುಕ್ರ ದೆಸೆ ಬಂತೆಂದು
ಬಂಗಾರದೆಳೆಯ ಗೂಡು
ಕಟ್ಟುತ ಸ್ವಂತ ನೆಲೆಗೆ ಸೇರಿದ
ಅನುಭವ ಒಳಗೊಳಗೆ
ನೆಮ್ಮದಿಯ ಭಾವ
ಚಿಟ್ಟೆಯಾಗಿ ಹಾರುವೆನೆಂದು
ನೂರಾರು ಮೈಲು ಹಾರುವೆನೆಂದು
ಸಾವಿರಾರು ಕನಸು ಕಾಣತಿರಲು

ಮಾರನೆಯ ದಿನ
ರೀಲರ್ ರೇಷ್ಮೆಯ ಗೂಡನು
ಬಿಸಿನೀರಿನಲಿ ಕುದಿಸಿ
ನೂಲು ತೆಗೆಯುವಾಗ
ಪ್ರಾಣಪಕ್ಷಿ ಹಾರಿಹೋಗುದೆಂದು
ಪಾಪ ರೇಷ್ಮೆ ಹುಳುವಿಗೆ
ತಿಳಿದಿರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


No comments: