04 March 2019

ನೀರು (ಕವನ)

       *ನೀರು*

ಎಲ್ಲೆಡೆ ಘೋಷಣೆ
ಮನೆಗೊಂದು ಮರ
ಊರಿಗೊಂದು ವನ.
ಬರೀ ಘೋಷಣೆ ಅಲ್ಲ
ಇದು ಜಾರಿಗೆ ಬಂದಿದೆ
ಕಾಡಿನ ಒಂದು ಮರ
ಕಡಿದರೆ ಮೂರು ನೆಟ್ಟರು.

ಮರಳು ಗಣಿಗಾರಿಕೆ
ಸಂಪೂರ್ಣ ಸ್ತಬ್ಧ
ಸಕಾಲಕ್ಕೆ ಮಳೆ ಬಂದು
ಕೆರೆ ಕಟ್ಟೆ ತುಂಬಿವೆ
ಒರತೆ ತೋಡಿದರೆ
ಕುಡಿವ ನೀರು ಲಬ್ಯ

ಸಸ್ಯ ಪ್ರಾಣಿ ಸಂಕುಲಗಳು
ಸಮೃದ್ಧಿಯಿಂದ ಜೀವಿಸುತ್ತಿವೆ
ಜೀವಿಗಳಿಗೆ ಜಲ ಅಪಾರವಾಗಿದೆ
ಅಕ್ಷರಶಃ ಜೀವಜಲ

ರಾಜ್ಯಗಳು ನೀರಿಗಾಗಿ
ಕಚ್ಚಾಡುತ್ತಿಲ್ಲ ಬಡಿದಾಡುತ್ತಿಲ್ಲ
ಎಲ್ಲರೂ ಸಮರಸದಿಂದ ಸಹಬಾಳ್ವೆ
ಮಾಡುತ್ತಿದ್ದಾರೆ .
ಎಷ್ಟೋ ದೇಶಗಳ ಜಲವಿವಾದಗಳು
ಬಗೆಹರಿದಿವೆ.
ವಿಶ್ವ ಶಾಂತಿಗೆ ಮುನ್ನುಡಿ
ಬರೆದಿದೆ.
ಇದರ ಫಲಶೃತಿ ಜಗದಾನಂದ .

ರೀ ಕುಡಿಯಾಕೆ ನೀರಿಲ್ಲ
ಎದ್ದೇಳ್ರಿ ಎಂದು ನನ್ನವಳು
ಕೂಗಿದಾಗ ಎದ್ದು ಖಾಲಿ
ಬಿಂದಿಗೆ ತೆಗೆದುಕೊಂಡು
ಮೂರು ಕಿಲೋಮೀಟರ್
ದೂರಕ್ಕೆ ಹೋಗಿ
ನೀರು ತರಲು ಅಣಿಯಾದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




No comments: